ಆಲಂಬರ್ಟ್, ಜೀನ್ ಲೆ ರಾಂಡ್ ದ (1717-1783). 

ಫ್ರಾನ್ಸಿನ ಗಣಿತಶಾಸ್ತ್ರಜ್ಞ, ಶ್ರೀಮಂತನೋರ್ವನ ಅನೌರಸಪುತ್ರನಾಗಿ ಜನಿಸಿದ ಈ ಶಿಶುವನ್ನು ಸೈಂಟ್ ಜೀನ್ ಲೆ ರಾಂಡ್ ಇಗರ್ಜಿಯ ಆವರಣದಲ್ಲಿ ತಾಯಿ ತೊರೆದಿದ್ದಳು. ಇಗರ್ಜಿಯ ಹೆಸರು ಉಪನಾಮವಾಗಿ ಇವನಿಗೆ ಬಂದದ್ದು ಈ ಕಾರಣದಿಂದ ಅನಾಥ ಬಾಲಕನನ್ನು ಸಂರಕ್ಷಿಸಿ ಪೋಷಿಸಿ ಬೆಳೆಸಿದವರು ಬಡ ಗಾಜುಗಾರ ದಂಪತಿಗಳು. ಆಲಂಬರ್ಟನ ಶ್ರೀಮಂತ ತಂದೆ ಗುಪ್ತವಾಗಿ ಈ ದಂಪತಿಗಳಿಗೆ ಧನಸಹಾಯ ಮಾಡುತ್ತಿದ್ದ. ಮುಂದೆ ಸುಪ್ರಸಿದ್ಧ ವಿದ್ವಾಂಸನೆಂದು ಜನತೆ ಹೊಗಳಿದಾಗ ಆಲಂಬರ್ಟನ ತಾಯಿ ತನ್ನ ಹಕ್ಕು ಸ್ಥಾಪಿಸಹೊರಟಳು. ಆದರೆ ಇವನು ನಿಷ್ಠುರವಾಗಿ ಆಕೆಯನ್ನು ತಿರಸ್ಕರಿಸಿ "ಗಾಜುಗಾರನ ಹೆಂಡತಿ ನನ್ನ ತಾಯಿ" ಎಂದು ಹೆಮ್ಮೆಯಿಂದ ಹೇಳಿದ. 1741ರಲ್ಲಿ ಇವನನ್ನು ಅಕಾಡೆಮಿ ಆಫ್ ಸೈನ್ಸಸ್‍ಗೆ ಸೇರಿಸಿಕೊಂಡರು. ಇವನು ಕೆಲಸಮಾಡಿದ ಕ್ಷೇತ್ರಗಳು - ಚಲನಶಾಸ್ತ್ರ, ಅಂಶಿಕ ವ್ಯತ್ಯಸ್ತಗಳಿಗೆ ಸಂಬಂಧಿಸಿದ ಕಲನಶಾಸ್ತ್ರ, ಗುರುತ್ವಾಕರ್ಷಣ ಬಲ, ವಿಷುವದ್ಬಿಂದುಗಳಿಗೆ ಸಂಬಂಧಿಸಿದಂತೆ ಅಯನಾಂಶ, ಅಕ್ಷಕಂಪ ಇತ್ಯಾದಿ. ಚಲನಶಾಸ್ತ್ರದಲ್ಲಿ ಇದನ್ನು ಆಲಂಬರ್ಟನ ತತ್ತ್ವ ಎಂಬ ಹೊಸ ಆವಿಷ್ಕಾರ ನೀಡಿ ಸಮಸ್ಯೆಗಳ ಅರ್ಥ ಮತ್ತು ಬಿಡಿಸಿಕೆಗೆ ಹೊಸದೃಷ್ಟಿ ನೀಡಿದ್ದಾನೆ. ಸಾಹಿತ್ಯ, ಚರಿತ್ರೆ, ತತ್ತ್ವ ಶಾಸ್ತ್ರ ಇವೆಲ್ಲವೂ ಇವನ ಆಸಕ್ತಿ ಕ್ಷೇತ್ರಗಳು. ಡೀಡ್ರೋ ಬರೆದ ವಿಶ್ವಕೋಶಕ್ಕೆ ಇವನ ಸಹಾಯ ವಿಶೇಷವಾಗಿತ್ತು. ಅದಕ್ಕೊಂದು ಮುನ್ನುಡಿಯನ್ನು ಬರೆದ. ಎರಡನೆಯ ಫ್ರೆಡರಿಕ್ ಚಕ್ರವರ್ತಿಯ (ಬರ್ಲಿನ್) ಮತ್ತು ಎರಡನೆಯ ಕ್ಯಾಥರೀನ್ ಮಹಾರಾಣಿಯ (ಸೇಂಟ್ ಪೀಟರ್ಸ್‍ಬರ್ಗ್) ಗೌರವಾಹ್ವಾನಗಳನ್ನು ಈ ಪ್ರತಿಷ್ಠಾವಂತ ತಿರಸ್ಕರಿಸಿದ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

						